ಕಳೆದ ಹಲವು ದಿನಗಳಿಂದ ಎಲ್ಲಿಗೂ ಪ್ರವಾಸಕ್ಕೆ ಹೋಗದೆ ಮನಸ್ಸು ಬೇಜಾರಿನಲ್ಲಿತ್ತು .ಅದಕ್ಕೆ ಸರಿಯಾಗಿ ಪ್ರವೀಣ "ಅಣ್ಣ ನಾಗಮಲೆಗೆ ಹೋಗಿ ಬರೋಣ ಬರ್ತೀಯ ?" ಅಂದ .ಸರಿ ಅಂತ ಹೊರಟೆ .
ಶನಿವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ನಾನು , ಪ್ರವೀಣ್ ಹಾಗು ಅವನ 3 ಗೆಳೆಯರು (ಮಹೇಶ್ ,ಸುನಿಲ್ ,ಸಂತೋಷ್ ) ಸೇರಿ ಮಲೆಯ ಮಹದೇಶ್ವರ ಬೆಟ್ಟಕ್ಕೆ ಹೋಗಲು ಮೆಜೆಸ್ಟಿಕ್ ನಿಂದ ಮೈಸೂರು ಬಸ್ಸು ಏರಿದೆವು . ಬಸ್ಸಿನಲ್ಲಿ ಸೀಟುಗಳು ಖಾಲಿ ಇದ್ದವು . ಯಾವ ಕಡೆ ಬಿಸಿಲು ಬೀಳುತ್ತದೆ ಅಂತ ಲೆಕ್ಕಾಚಾರ ಹಾಕಿ, ಬಲಗಡೆ ಬೀಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ನಾನು ಪ್ರವೀಣ ಆ ಕಡೆಯ ಸೀಟಿನಲ್ಲಿ ಕುಳಿತೆವು .ಉಳಿದವರು ನಮ್ಮ ಮುಂದಿನ ಸೀಟಿನಲ್ಲಿ ಕುಳಿತರು . ಇನ್ನೊಂದೆಡೆ ಕಂಡಕ್ಟರ್ ಶನಿವಾರವೂ ಬಸ್ ಖಾಲಿ ಇದೆಯಲ್ಲ ಅಂತ ಬೈಕೊಳ್ತಾ ಇದ್ದ . ಇನ್ನು ಡ್ರೈವರ್ ಸಾಹೇಬರು ನಿಧಾನವೇ ಪ್ರಧಾನ ಅನ್ನೋದನ್ನ ಅಕ್ಷರಶಃ ಪಾಲಿಸುತ್ತಾ ಇದ್ರು .
ಅಂತು ಇಂತೂ 1 ಗಂಟೆಯ ನಂತರ ಬಸ್ ಬೆಂಗಳೂರನ್ನು ದಾಟಿ ಮೈಸೂರ್ ರೋಡ್ ಗೆ ಬಂದು ಸೇರಿತು . ಆಗ ತಿಳೀತು ನಾವು ಕುಳಿತ ಕಡೆಯೇ ಬಿಸಿಲಿನ ಝಳ ಬೀಳುತ್ತಿದೆ ಅಂತ.ಇನ್ನೊಂದೆಡೆ ಕೂರೋಣವೆಂದರೆ ಅಷ್ಟರಲ್ಲಾಗಲೇ ಉಳಿದ ಸೀಟುಗಳು ತುಂಬಿತ್ತು ಹಾಗಾಗಿ ನಾವು ಬೇರೆ ಗತಿ ಇಲ್ಲದೆ ಅಲ್ಲೇ ಕುಳಿತೆವು.
ಬಸ್ಸು ಚೆನ್ನರಾಯಪಟ್ಟಣದಲ್ಲಿ ಹತ್ತು ನಿಮಿಷ ಕಾಫಿಗಾಗಿ ನಿಂತಿತು. ನಾವೆಲ್ಲ ಟೀ ಕುಡಿಯಲು ಕೆಳಗಿಳಿದೆವು . ಟೀ ಕುಡಿದು ಮರಳಿ ಬಂದಾಗ ಪ್ರವೀಣನ ಗೆಳೆಯರು ಕುಳಿತಿದ್ದ ಸೀಟ್ನಲ್ಲಿ 3 ಜನ ಮಹಿಳೆಯರು ಕುಳಿತಿದ್ದರು . ಮಹೇಶ ಮೊದಲು ಗಲಿಬಿಲಿಗೊಂದರೂ ಧೈರ್ಯ ತಂದುಕೊಂಡು "ಇದು ನಮ್ಮ ಸೀಟು" ಅಂದ. ಅವರಿಂದ ನೋ ರೆಸ್ಪಾನ್ಸ್ . ಅವರೂ ಅವನಷ್ಟೇ ಗಾಬರಿಗೊಂಡವರಂತೆ ಕಂಡು ಬಂತು. ಅದಕ್ಕೆ ಸರಿಯಾಗಿ ಕಂಡಕ್ಟರ್ "ಬೇರೆ ಎಲ್ಲಾದರೂ ಕೂತ್ಕೋಳಿ ಸಾರ್" ಅಂದ.ಮಹೇಶ,ಸುನಿಲ,ಸಂತೋಷ ಮುಖ ಮುಖ ನೋಡ್ಕೊಂಡು ಒಂದೊಂದು ಕಡೆ ಕುಳಿತರು.ಬಸ್ಸು ಹೊರಟಿತು, ಸಡನ್ ಆಗಿ ಆ ಮೂರು ಮಹಿಳೆಯರು "ಬಸ್ಸು ನಿಲ್ಲಿಸಿ ,ನಾವು ಬೆಂಗಳೂರಿಗೆ ಹೋಗೋ ಬಸ್ಸು ಅಂದುಕೊಂಡು ಹತ್ತಿದ್ವಿ" ಅಂತ ಹೇಳಿ ಇಳಿದು ಹೋದರು.ಮರಳಿ ಸೀಟು ಸಿಕ್ಕಿದಕ್ಕೆ ಸಂತೋಷನಿಗೆ ಹಾಲು ಕುಡಿದಷ್ಟು ಸಂತೋಷ. ಕಂಡಕ್ಟರ್ ಮಾತ್ರ "ಒಬ್ಬರು ಟಿಕೆಟ್ ತೆಗೆದುಕೊಂಡಿಲ್ಲ ದಯವಿಟ್ಟು ತಗೊಳ್ಳಿ" ಅಂತ ಕೂಗ್ತಾ ಇದ್ದ . ಯಾರೂ ಬಗ್ಗದಿದ್ದಾಗ ಟಿಕೆಟ್ ಚೆಕ್ ಮಾಡಲು ಪ್ರಾರಂಬಿಸಿದ. ನಮ್ಮ ಹಿಂದಿನ ಸೀಟ್ ನಲ್ಲಿದ್ದ ಪ್ರಯಾಣಿಕ ಕೊಟ್ಟ ಟಿಕೆಟ್ ನೋಡಿ ಕಂಡಕ್ಟರ್ "ರೀ ಇದು ನಮ್ಮ ಬಸ್ ನ ಟಿಕೆಟ್ ಅಲ್ಲ" ಅಂದ. ಆ ಮನುಷ್ಯ ಪಕ್ಕದ ಬಸ್ ಏರುವುದರ ಬದಲು ನಮ್ಮ ಬಸ್ ಏರಿದ್ದ.ಆ ಬಸ್ ಆಗಲೇ ಹೊರಟು ಹೋಗಗಿತ್ತು.ಪ್ರಯಾಣಿಕ ಪಾಪ ಪಾಂಡುವಿನ ಗಾಬರಿ ಗೋಪಾಲಯ್ಯ ಆಗಿದ್ದ. ಕಂಡಕ್ಟರ್ "ಟಿಕೆಟ್ ತಗೊಳ್ಳಿ,ಟಿಕೆಟ್ ತಗೊಳ್ಳಿ" ಅಂದ.ಅದಕ್ಕೆ ಪ್ರಯಾಣಿಕ "ನನ್ನ ಹತ್ರ ಮೈಸೂರಿನ ಟಿಕೆಟ್ ಇದೆಯಲ್ಲ? ಎರಡೂ ಗೋರ್ಮೆಂಟ್ ಬಸ್ ತಾನೆ? ಬಯ್ ಮಿಸ್ಟೇಕ್ ಈ ಬಸ್ ಹತ್ತಿದೆ" ಅಂದ.ಅದಕ್ಕೆ ಕಂಡಕ್ಟರ್ "ಸ್ವಾಮಿ, ನಿಮ್ಮ ಮನೆ ಅಂತ ಬಯ್ ಮಿಸ್ಟೇಕ್ ನಿಮ್ಮ ಪಕ್ಕದ ಮನೆಗೆ ಹೋಗಕಾಗುತ್ತಾ? ಹಾಗೆ ಇದೂನು ಕೂಡ. ಮೈಸೂರ್ ಗೆ ಟಿಕೆಟ್ ನಿನ್ನೇದು ಸಿಗುತ್ತೆ, ಈ ಟಿಕೆಟ್ ನಡೆಯೋಲ್ಲ ಬೇರೆ ತಗೊಳ್ಳಿ" ಅಂದ.ಆದ್ರೆ ಪ್ರಯಾಣಿಕ ಮಾತ್ರ ಇನ್ನೂ ಟಿಕೆಟ್ ಕೈಲಿ ಹಿಡ್ಕೊಂಡು ಯೋಚನೆ ಮಾಡ್ತಾ ಇದ್ದ. ಅದನ್ನು ಕಂಡು ಕಂಡಕ್ಟರ್ "ಸ್ವಾಮಿ ಅ ಟಿಕೆಟ್ ಸತ್ತು ಹೋಗಿದೆ, ಜೀವ ಇಲ್ಲ, ಬೇರೆ ತಗೊಳ್ಳಿ" ಅಂದ.ಕೊನೆಗೂ ಪ್ರಯಾಣಿಕ ಗತಿ ಇಲ್ಲದೆ ಬೇರೆ ಟಿಕೆಟ್ ಖರೀದಿಸಿದ.
ಸಂಜೆ ೬ ಗಂಟೆ ಸುಮಾರಿಗೆ ನಮ್ಮ ಬಸ್ ಮೈಸೂರ್ ತಲುಪಿತು. ಅಲ್ಲಿ ನಮ್ಮ ಜೊತೆ ಸುಬ್ಬು(ಸುಬ್ರಮಣ್ಯ) ಸೇರಿಕೊಂಡ. ಒಂದು ಕಪ್ ಟೀ ಕುಡಿದ ನಂತರ ಸುಬ್ಬುವಿನ ಜೀಪ್ ನಲ್ಲಿ ನಾವು ಬೆಟ್ಟದ ಕಡೆ ಹೊರಟೆವು. ಜೀಪ್ ನ ಸೌಂಡ್ ಸಿಸ್ಟಂ ಸೂಪರಾಗಿತ್ತು. ನಾವು ದೊಡ್ಡದಾಗಿ ಹಾಡನ್ನು ಹಾಕಿಕೊಂಡು ಮಲೆಯ ಮಹದೇಶ್ವರ ಬೆಟ್ಟದ ಕಡೆ ಗಾಡಿ ಚಲಾಯಿಸಿದೆವು. ಕೊಳ್ಳೆಗಾಲದ ರಸ್ತೆಯ ಗತಿ ಮಾತ್ರ ಬಹಳ ಕೇವಲವಾಗಿತ್ತು. ಹೊಸ ರಸ್ತೆ ಮಾಡುವ ಸಲುವಾಗಿ ಇದ್ದ ರಸ್ತೆಯನ್ನೂ ಅಗೆಡಿಟ್ಟಿದ್ದರು. ಅಂತು 8:30 ರ ಸುಮಾರಿಗೆ ನಾವು ಕೊಳ್ಳೇಗಾಲ ತಲುಪಿದೆವು.ಅಲ್ಲಿ ಅನ್ನಪೂರ್ಣ ಹೋಟೆಲ್ ನಲ್ಲಿ ಪೂರ್ಣ ಊಟ ಮಾಡಿ, ಬೆಟ್ಟ ಹತ್ತುವಾಗ ತಿನ್ನಲು ಬೇಕಾಗುವ ಹಣ್ಣು,ಬ್ರೆಡ್ ಗಳನ್ನು ತೆಗೆದುಕೊಂಡು ಮಲೆಯ ಮಹದೇಶ್ವರ ಬೆಟ್ಟದ ಕಡೆ ಹೊರಟೆವು .ಅಷ್ಟರಲ್ಲಾಗಲೇ ಸುಬ್ಬು ಮಲೆಯ ಮಹದೇಶ್ವರ ಬೆಟ್ಟದ ಒಂದು ಲಾಡ್ಜ್ ಕಾಲ್ ಮಾಡಿ ಒಂದು ಹಾಲ್ ಬುಕ್ ಮಾಡಿದ್ದ. ಕಾರ್ತಿಕ ಮಾಸದ ಸಮಯ ಆದ್ದರಿಂದ ಬಹಳ ಜನರಿರುತ್ತಾರೆ ಲಾಡ್ಜ್ ಗಳು ತುಂಬಿರುತ್ತವೆ ಉಳಿಯಲು ಜಾಗ ಇರುವುದಿಲ್ಲ ಎಂಬೆಲ್ಲ ಸುದ್ದಿಗಳು ನಮ್ಮನ್ನು ಚಾಪೆ ಹಾಗು ಬೆಡ್ ಶೀಟ್ ತರುವಂತೆ ಮಾಡಿತ್ತು.
ಅಲ್ಲಿಯವರೆಗೂ ಜೀಪ್ ಓಡಿಸುತ್ತಿದ್ದ ಪ್ರವೀಣ್ ಕೊಳ್ಳೆಗಾಲದ ಸ್ವಲ್ಪ ದೂರದ ನಂತರ ಮಹೇಶನಿಗೆ ಡ್ರೈವಿಂಗ್ ಸೀಟ್ ಒಪ್ಪಿಸಿದ. ಮಹೇಶನ ಡ್ರೈವಿಂಗ್ ನ ಮಜಾ ಅನುಭವಿಸಿಯೇ ತೀರಬೇಕು. ಡ್ರೈವಿಂಗ್ ಸೀಟ್ನಲ್ಲಿ ಕುಳಿತ ಮಹೇಶ ಮೂರನೇ ಗೇರ್ ಗಾಗಿ ಹುಡುಕಾಟ ನಡೆಸಿದ್ದು , ಗೇರ್ ಚೇಂಜ್ ಮಾಡುವ ಸಮಯದಲ್ಲೆಲ್ಲ ಜೀಪ್ ಎಣ್ಣೆ ಹೊಡೆದವರಂತೆ ಒಲಾಡುತ್ತಿದ್ದುದು ನಮ್ಮೆಲ್ಲರಿಗೆ ನಗು ತಡೆಯದಂತೆ ಮಾಡಿತ್ತು.. ಸುಮಾರು 15 ಕಿ ಮೀ ಜೀಪ್ ಓಡಿಸಿದ ಮೇಲೆ ಸುಬ್ಬು ಡ್ರೈವಿಂಗ್ ಮಾಡಲು ಕುಳಿತ.ಅಲ್ಲಿಂದ ಸ್ವಲ್ಪ ದೂರದ ಹೋಗುವಷ್ಟರಲ್ಲಿ ಆಗ ತಾನೆ ಆದ ಒಂದು ಅಪಘಾತ ಕಣ್ಣಿಗೆ ಬಿತ್ತು.ಒಂದು ಇಂಡಿಕಾ ಕಾರು ದಾರಿಯ ಬದಿಯ ಮರಕ್ಕೆ ಬಡಿದು ತಲೆಕೆಳಗಾಗಿ ಬಿದ್ದಿತ್ತು.೪ ಜನ ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದರು. ಒಬ್ಬ ಕುಳಿತುಕೊಂಡಿದ್ದ. ಆ ದೃಶ್ಯವನ್ನು ನೋಡಿ ೩ ಜನ ಸ್ಪಾಟ್ ಡೆತ್ ಅಂದುಕೊಂಡು ಜೀಪ್ ನಿಲ್ಲಿಸಿ ಅವರ ಬಳಿ ಓಡಿದೆವು. ಅದೃಷ್ಟಕ್ಕೆ ಯಾರಿಗೂ ಪ್ರಾಣ ಹಾನಿ ಆಗಿರಲಿಲ್ಲ. ಅವರಿಗೆ ನೀರು ಕುಡಿಸಿ ಮಾತನಾಡಿಸತೊಡಗಿದೆವು.ಪ್ರವೀಣ ನಮ್ಮ ಯಡಿಯೂರಪ್ಪನವರ ಕೃಪಾ ಪೋಷಿತ ಆಂಬುಲೆನ್ಸ್ (೧೦೮) ಗೆ ಕಾಲ್ ಮಾಡಿದ.ನಮಗೆ ತಡವಾಗುತ್ತಿದ್ದುದರಿಂದ ಹೊರಡೋಣ ಅಂದುಕೊಂಡರೂ , ಅವರ ಪರಿಸ್ಥಿತಿಯನ್ನು ನೋಡಿ ನಮಗೆ ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ದುರಾದೃಷ್ಟಕರ ಸಂಗತಿ ಎಂದರೆ ಅವರು ಬಿದ್ದುದ್ದನ್ನು ನೋಡಿಯೂ ಕೆಲವು ವಾಹನದವರು ನಿಲ್ಲಿಸದೆಹೋಗಿದ್ದರು. ಕಾರಿನಲ್ಲಿದ್ದ ಐವರೂ ವಿಪರೀತ ಕುಡಿದಿದ್ದರು ಅದೇ ಅಮಲಿನಲ್ಲಿ ವಾಹನ ಚಲಾಯಿಸುವಾಗ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಯಮಪುರಿಯ ಬಾಗಿಲು ತಟ್ಟಿ ಬಂದಿದ್ದರು. ನಮ್ಮ ಕರೆಗೆ ತಕ್ಷಣ ಪ್ರತಿಕ್ರಯಿಸಿದ ಅಂಬುಲೆನ್ಸ್ ನವರು ಮುಂದಿನ ೧೫ ನಿಮಿಷದೊಳಗೆ ಅಪಘಾತವಾದ ಸ್ಥಳದಲ್ಲಿದ್ದರು .ಮೊದಲು ಅಪಘಾತವಾದ ಕಾರಿನ ಜಾಗದ ಹಾಗು ಜನರ ಯಥಾವತ್ ಫೋಟೋ ತೆಗೆದುಕೊಂಡು ನಂತರ ಎಲ್ಲರಿಗು ಪ್ರಥಮ ಚಿಕಿತ್ಸೆ ಕೊಟ್ಟರು. ನಾವೂ ಇತ್ತ ಕಡೆ ಹೊರಡಲು ಅನುವಾದೆವು
ಆಗ ಅಪಘಾತಕ್ಕೊಳಗಾದ ಇಬ್ಬರು ನಮ್ಮ ಬಳಿ ಬಂದು ಕೃತಜ್ಞತಾ ಮನೋಭಾವದಿಂದ ಧನ್ಯವಾದ ಅರ್ಪಿಸಿದರು. ನಮ್ಮೆಲ್ಲರ ಮುಖದಲ್ಲಿ ಒಂದು ರೀತಿಯ ಧನ್ಯತಾ ಮನೋಭಾವ ಹೊಮ್ಮುತ್ತಿತ್ತು.ನಾವು ಹೊರಟಿದ್ದನ್ನು ಕಂಡು ಅಂಬುಲೆನ್ಸ್ ನ ಒಬ್ಬ ಸಿಬ್ಬಂದಿ "ಸಾರ್ ನಾನೇನು ಹೇಳುವುದಿಲ್ಲ , ಹ್ಯಾಪಿ ಜರ್ನಿ "ಅಂದ.ನಾವೆಲ್ಲರೂ ಆ ಗುಂಗಿನಿಂದ ಹೊರ ಬರುವಷ್ಟರಲ್ಲಿ ಎಂ ಎಂ ಹಿಲ್ಲ್ಸ್ ತಲುಪಿದ್ದೆವು.ನಾವು ಬುಕ್ ಮಾಡಿದ್ದ ಲಾಡ್ಜ್ ಹುಡುಕಿ ಮಲಗುವಾಗ ಬರೋಬ್ಬರಿ ೨ ಗಂಟೆ.
ಬೆಳಿಗ್ಗೆ ೪ ಗಂಟೆಗೆ ಅಕ್ಕ ಪಕ್ಕದ ರೂಂ ನವರ ಗಲಾಟೆಯಿಂದ ನಮಗೂ ಬೆಳಗಾಯಿತು. ಬೆಳಗಿನ ಶೌಚ ಮುಗಿಸಿ ಒಬ್ಬ ಹುಡುಗನ ಬಳಿ ನಾಗಮಲೆಗೆ ಹೋಗುವ ದಾರಿ ವಿಚಾರಿಸಿದೆವು. ಆತ "ಸಾರ್ ೨ ಕಿ ಮೀ ರೋಡ್ ಚೆನ್ನಾಗಿದೆ ಆಮೇಲೆ ರೋಡ್ ಮೋಸ " ಅಂದ. "ಜೀಪ್ ಹೋಗ್ತದೆಯಾ ?" ಅನ್ನೋ ಪ್ರಶ್ನೆಗೆ "ಜೀಪ್ ಹೋಗ್ತದೆ ಆದ್ರೆ ನಿಮ್ಮ ಜೀಪ್ ಹೋಗಲ್ಲ, ರೋಡ್ ಫುಲ್ ಮೋಸ" ಅಂದ.
ಆದರೂ ಧೈರ್ಯ ಮಾಡಿ ನಮ್ಮ ಜೀಪ್ನಲ್ಲೇ ಹೊರಟೆವು.ಮೂರ್ನಾಕು ಜನರ ಬಳಿ ಎಂ ಎಂ ಹಿಲ್ಲ್ಸ್ ನಿಂದ ನಾಗಮಲೆಯ ದೂರ ವಿಚಾರಿಸಿದೆವು. ಒಬ್ಬೊಬ್ಬರೂ ಅವರಿಗೆ ಮನಸ್ಸಿಗೆ ಬಂದಷ್ಟು ಕಿ ಮೀ ಇದೆ ಎಂದು ಹೇಳುತ್ತಿದ್ದರು. ನಾವು ಕೊನೆಗೆ ಬೇಸತ್ತು ಇನ್ನು ಕೇಳಬಾರದು ಎಂದು ತೀರ್ಮಾನಿಸಿ ಹೊರಟೆವು.
ನಾಗಮಲೆ ಒಂದು ಬೆಟ್ಟದ ಹೆಸರು. ಆ ಬೆಟ್ಟದ ಮೇಲೆ ೨ ಬಂಡೆಗಳಿವೆ , ಒಂದು ಹಾವಿನ ಹೆಡೆ ಆಕಾರದಲ್ಲಿದ್ದು ಇನ್ನೊಂದು ಲಿಂಗದಾಕಾರದಲ್ಲಿದೆ.ಶೇಷ ಲಿಂಗವನ್ನು ರಕ್ಷಣೆ ಮಾಡುತ್ತಿದ್ದಾನೆ ಎನ್ನುವ ಪ್ರತೀತ. ನಾಗಮಲೆಗೆ ಹೋಗಬೇಕಾದರೆ ೭ ಬೆಟ್ಟಗಳನ್ನು ಹತ್ತಿ ಇಳಿಯಬೇಕು. ೩ ಬೆಟ್ಟಗಳನ್ನು ಜೀಪ್ನಲ್ಲಿ ಹತ್ತಿ ಇಳಿಯ ಬಹುದು. ಇನ್ನುಳಿದ ೪ ನ್ನು ನಾವೇ ಇರಬೇಕು. ಮಲೆಯ ಮಹದೇಶ್ವರ ಬೆಟ್ಟಕ್ಕೆ ಬಂದ ಜನರು ನಾಗಮಲೆಯವರೆಗೆ (ಸುಮಾರು ೧೨ ಕಿ ಮೀ ) ಬರಿಗಾಲಲ್ಲಿ ನಡೆದೇ ಬರುತ್ತಾರೆ.
ನಾವು ೩ ಬೆಟ್ಟವನ್ನು ಜೀಪ್ನಲ್ಲಿ ಕ್ರಮಿಸಿದೆವು. ರೋಡ್ ನಾವು ಎಣಿಸಿದ್ದಕ್ಕಿಂತ ಚೆನ್ನಾಗಿತ್ತು ಹಾಗಾಗಿ ೬:೪೫ ರ ವೇಳೆಗೆ ನಾವು ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಜೀಪ್ನಿಂದ ಇಳಿಯುತ್ತಿರುವಾಗಲೇ ಒಬ್ಬ ಸಣ್ಣ ಹುಡುಗ ಬಂದು "ಅಣ್ಣ ಕಾಸು ಕೊಡಿ" ಅಂದ.ಅವನಿಗೆ ಬರುವಾಗ ಕೊಡ್ತೀವಿ ಅಂತ ಹೇಳಿ ನಡೆಯಲು ಪ್ರಾರಂಭಿಸಿದೆವು. ಬೆಟ್ಟದ ಬುಡದಲ್ಲಿ ಸಾಲಾಗಿ ಕೆಲವು ಮನೆಗಳಿದ್ದು , ಮನೆಯವರು ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ನಾವು ಅವರ ಮನೆ ಬಳಿಗೆ ಹೋಗುತ್ತಿದ್ದಂತೆ ಅವರ ಮಕ್ಕಳು "ಅಣ್ಣ ಕಾಸ್ ಕೊಡಿ " ಅಂತ ದುಂಬಾಲು ಬೀಳುತ್ತಾರೆ. ಇನ್ನು ಕೆಲವರು "ಅಣ್ಣ ಬಿಸ್ಕುಟು ತೆಗ್ಸ್ಕೊಡಿ " ಅಂತ ಹಿಂದೆ ಬೀಳುತ್ತಾರೆ. ನಾವು ಅವರ ಅಂಗಡಿಯಿಂದ ಖರೀದಿಸಿ ಕೊಟ್ಟರೆ ನಾವು ಹೋದ ಮೇಲೆ ಮತ್ತೆ ಅದನ್ನು ಅಂಗಡಿಗೆ ಮರಳಿಸುತ್ತಾರೆ.ಹೀಗೆ ಸುಮಾರು ನೂರು ಜನ ಹುಡುಗರು ಬೆನ್ನು ಬೀಳುತ್ತಾರೆ."ಅಣ್ಣ ಕಾಸ್ ಕೊಡಿ " ಎನ್ನುವುದು ಅವರ ಟ್ರೇಡ್ ಮಾರ್ಕ್. ಅದನ್ನು ಕಂಡು ನನಗೆ ತೆಲಗು ಪೋಕರಿ ಫಿಲಂ ನ ಭಿಕ್ಷುಕರು ನೆನಪಾಗ್ತಾ ಇದ್ರು.
ಬೆಟ್ಟ ಸುಮಾರು ೫ ಕಿ ಮೀ ಇದ್ದು ಸುತ್ತಲೂ ಹಸಿರು ಬೆಟ್ಟಗಳಿಂದ ಕಂಗೊಳಿಸುತ್ತಿತ್ತು.ನಾವು ಅಲ್ಲಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತ ತಂದಿದ್ದ ಹಣ್ಣು ತಿನ್ನುತ್ತಾ ಮುಂದೆ ಹತ್ತಿದೆವು. ಸುಮಾರು ೨ ಗಂಟೆ ಹತ್ತಿದ ಬಳಿಕ ನಾವು ನಾಗಮಲೈ ನ ತುದಿ ತಲುಪಿದೆವು. ಅಲ್ಲಿ ಶಿವನಿಗೆ ನಮಸ್ಕರಿಸಿ ಸ್ವಲ್ಪ ದಣಿವಾರಿಸಿಕೊಂಡು ಕೆಳಗಿಳಿಯಲು ಪ್ರಾರಂಭಿಸಿದೆವು. ೧೧ ಗಂಟೆಯ ಒಳಗೆ ನಾವು ಜೀಪ್ ನ ಬಳಿ ಇದ್ದೆವು. ನಂತರ ಮಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರನ ದರ್ಶನ ಭಾಗ್ಯವನ್ನು ಪಡೆದೆವು.
ಅಲ್ಲಿಂದ ಹೊರಟು ಮಲೆ ಮಹದೇಶ್ವರ ಬೆಟ್ಟದ ಗಿರಿದರ್ಶಿನಿ ಹೋಟೆಲ್ ನಲ್ಲಿ ತಿಂಡಿ ತಿಂದು ಮೈಸೂರ್ ಕಡೆ ಪ್ರಯಾಣ ಬೆಳೆಸಿದೆವು. ದಾರಿ ಮಧ್ಯದಲ್ಲಿ ಸ್ವಲ್ಪ ದೂರ ನಾನೂ ಜೀಪ್ ಚಲಾಯಿಸಿದೆ. ಜೀಪ್ ಓಡಿಸಿದ ಮೊದಲ ಅನುಭವ ಚೆನ್ನಾಗಿತ್ತು[ರಸ್ತೆ ಬದಿಯಲ್ಲಿ ಹೋಗುವವರ ಅದೃಷ್ಟವೂ ಚೆನ್ನಾಗಿತ್ತು]. ಎಲ್ಲಿಯೂ ಯಾರಿಗೂ ಹಾನಿ ಉಂಟು ಮಾಡದೆ ಜೀಪ್ ಚಲಾಯಿಸಿದೆ. ಮತ್ತೆ ಕೊಳ್ಳೆಗಾಲದ ಅನ್ನಪೂರ್ಣ ಹೋಟೆಲ್ ನಲ್ಲಿ ಮಧ್ಯಾಹ್ನದ ಊಟ. ಊಟ ಮುಗಿಸಿ ಹೊರಟ ಗಾಡಿ ನಿಂತಿದ್ದೆ ಮೈಸೂರಿನಲ್ಲಿ. ಸಂಜೆ ೬ ರ ಸುಮಾರಿಗೆ ಮೈಸೂರಿನಲ್ಲಿ ಇದ್ದೆವು. ಸುಬ್ಬು ನಮ್ಮನ್ನು ಬೆಂಗಳೂರಿನ ಬಸ್ ಹತ್ತಿಸಿ ಬೀಳ್ಕೊಟ್ಟ. ನಾನು ಬಸ್ಸು ಹತ್ತಿ ಮುಚ್ಚಿದ ಕಣ್ಣು ಬಿಟ್ಟಿದ್ದೇ ಬೆಂಗಳೂರಿನಲ್ಲಿ.
ಒಂದೆಡೆ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಸಂತೋಷ ಇದ್ದರೆ , ಇನ್ನೊಂದೆಡೆ ನಾಳೆಯಿಂದ ಮತ್ತದೇ ಕೆಲಸಕ್ಕೆ ಹೋಗಬೇಕಲ್ಲಾ ಎನ್ನೋ ವ್ಯಥೆಯಿಂದ ಎಲ್ಲರೂ ಅವರವರ ಮನೆ ಕಡೆ ಹೆಜ್ಜೆ ಹಾಕಿದೆವು.
8 comments:
matte naagamalai ge hogi banda anubhava. . ! keep the posts coming. . :)
I love this man. A very very good post.
btw, who is subbu?? do i know him?
upload trip photos as well, dude. It ll be good.
lo nin blog iropdanna marethu bitteya hege? bere pravasa, anubhava ella bari.
samsaarastaraddu idolle mareguli thana aithalla!! :)
lekhana tumba chennagi barediddiya maga..............
Thanks vinay :)
Sony Ericson W810i ge many more happy returns of the B-day...in Advance
neevu daariyalli apaghataa adavarige shusrushe maadiddu nijavaagalu olleya kelasa matte nimma haadi yalli obba prayanika yavudo bus yeralu hogi yaavudo bus yeriddu haasyaspada
neevu daariyalli apaghataa adavarige shusrushe maadiddu nijavaagalu olleya kelasa matte nimma haadi yalli obba prayanika yavudo bus yeralu hogi yaavudo bus yeriddu haasyaspada
Post a Comment